ಅಂತೂ ಈ ಸೆಮಿಸ್ಟರ್‌ ನ ಕೊನೆಯ ಎಕ್ಸಾಮ್‌ ಪೇಪರನ್ನು ಬರೆದು ಮನೆಯ ಬಸ್ಸನ್ನು ಹತ್ತಿದ್ದಾಯ್ತು. ಈ ವರ್ಷ ಅದೇನು ಸೆಕೆಯೋ ಏನೋ. ಇಡೀ ದಿನ ಫ್ಯಾನ್‌ ಇಲ್ಲದೇ ನಡೆಯುವುದಿಲ್ಲ. ಲೋಟಗಟ್ಟಲೇ ನೀರು ಕುಡಿದರೂ ದೇಹಕ್ಕೆ ತಂಪಿಲ್ಲ. ಹಾಗಂತ ಬೇಸಿಗೆ ರಜೆಯನ್ನು ಸೆಕೆ ಅಂದ ಮಾತ್ರಕ್ಕೆ ಮನೆಯೊಳಗೇ ಕೂತು ಕಳೆಯಲಾದೀತೇ? ಊರು ತೋಟ ಕೇರಿ ಅಜ್ಜನಮನೆ ಹೀಗೆ ಎಲ್ಲಾ ಕಡೆನೂ ಸುತ್ತು ಹೊಡೆದು ಬರಬೇಕಲ್ಲ!

ಶಾಲಾ ದಿನಗಳಲ್ಲಾಗಿದ್ದರೆ ಬೇಸಿಗೆ ರಜೆ ಅಂದ ಕೂಡಲೇ ನಾಲ್ಕೈದು ನೋಟ್‌ ಬುಕ್‌ ತುಂಬುವಷ್ಟು ಹೋಮ್‌ ವರ್ಕ್‌ ಇರುತ್ತಿತ್ತು. ಬೆಟ್ಟ ಬ್ಯಾಣ ಅಂತ ಅಲೆದಾಡೋ ಬರದಲ್ಲಿ ಅದೆಲ್ಲಾ ಎಲ್ಲಿ ನೆನಪಿರುತ್ತಿತ್ತು ಹೇಳಿ. ಅಯ್ಯೋ.. ಹೋಮ್‌ ವರ್ಕ್‌ ಬರೆಯೋದು ಬಾಕಿ ಇದೆಯಲ್ಲ ಅಂತ ನೆನಪಾಗೋದು ಬೇಸಿಗೆ ರಜೆ ನಂತರ ಶಾಲೆ ಶುರುವಾಗೋ ಹಿಂದಿನ ದಿನ. ರಾತ್ರಿಯೆಲ್ಲಾ ಗೀಚುವುದೇ ಗೀಚುವುದು. ಈ ಡಿಗ್ರಿ ಕಾಲದಲ್ಲಿ ಅದೊಂದಿಲ್ವಲ್ಲ ಮಾರ್ರೆ ಅಂತ ಖುಷಿ ಪಡಬೇಕಷ್ಟೇ.

ಬೇಸಿಗೆ ರಜೆ ಪ್ರಾರಂಭವಾದಾಗ ಎಷ್ಟೊಂದು ದಿನಗಳಿವೆಯಲ್ಲ ಎಂದೆನಿಸಿದರೂ ಕೊನೆ ಕೊನೆ ಎಲ್ಲವೂ ರಪ್‌ ಅಂತ ಕಣ್ಮುಂದೆ ಪಾಸಾದ ಅನುಭವ. ಒಲ್ಲದ ಮನಸ್ಸಿನಿಂದ ಮತ್ತೆ ಮನೆಯಿಂದ ಕಾಲೇಜಿನ ಕಡೆ ಬರಲೇಬೇಕು. ಮುಗಿಯದ ರಜಾದಿನದ ಹ್ಯಾಂಗೋವರ್.‌ ಮತ್ತದೇ ಕ್ಲಾಸು, ನೋಟ್ಸು, ಅಸೈನ್‌ ಮೆಂಟು, ಸೆಮಿನಾರು, ಪರೀಕ್ಷೆಗಳು. ಉಳಿದದ್ದು ರಜಾದಿನದ ನೆನಪುಗಳಷ್ಟೇ. 

08 ಮೇ 2022, ಉಜಿರೆ
(ಸಹಪಾಠಿ ಪತ್ರಿಕೆಗೆ ಬರೆದ ಬರಹ)