ಯಾವುದಾದರೂ ವಿಷಯದ ಬಗ್ಗೆ 'ಗುಂಗು' ಹತ್ತಿಬಿಟ್ಟರೆ, ಯಾವಾಗಲೂ ಹೋದಲ್ಲಿ- ಬಂದಲ್ಲಿ ಆ ವಿಷಯದ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಕೆಲವರಿಗೆ ಗುಂಗು ಎಂಬ ಶಬ್ದ ಗೊತ್ತಾಗದಿರಬಹುದು.‌ಅದೇ ಏನಿದು 'ಗುಂಗು' ಅಂತಿದ್ದಾನೆ? ನಮ್ಮ ಕಡೆ ಯಾವುದಾದರೂ ಒಂದು ವಿಷಯವು ತಲೆಯೊಳಗೆ ಹೊಕ್ಕಿಬಿಟ್ಟರೆ ಅದೇ ವಿಷಯ ತಲೆಕೊರೆಯುತ್ತಿರುತ್ತದೆ.

..

ನಮ್ಮಂಥ ವಿದ್ಯಾರ್ಥಿಗಳಿಗೆ ಎಕ್ಸಾಮು, ಸ್ಟಡಿಯ 'ಗುಂಗು' ಹತ್ತಿರುತ್ತದೆ. ಅದರಲ್ಲೂ ಈ 'ಮಾರ್ಕ್ಸು' ಎಂಬ ಪದ ಮಾತ್ರ ತಲೆಯಲ್ಲಿ ಅಚ್ಚಾಗಿ ಕುಳಿತಿರುತ್ತದೆ. ಕಾರಣ ಹೇಳಬೇಕಿಲ್ಲವಲ್ಲ. ಇಷ್ಟೆಲ್ಲಾ ಸ್ಟಡಿ ಮಾಡಲು ಮುಖ್ಯ ಕಾರಣ ಅದೇ ಅಲ್ಲವೇ.... ಕೆಲವೊಮ್ಮೆ ಇದೇ ಸ್ಟಡಿಯ ಗುಂಗು ಬೇರೆ ಕಡೆ ಅಪ್ಲೈ ಆದಲ್ಲಿ ನಗೆಪಾಟಲಿಗೀಡಾಗುತ್ತದೆ. ಎಲ್ಲಾ ತಗೊಂಡು
..

ನಮ್ದೇ ಒಂದು ಘಟನೆ ತಗೊಳ್ಳಿ....
..

ಅದು ಜಸ್ಟ್ ನನ್ನ ಫಸ್ಟ್ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿದ ಸಮಯ. ಊರಿಗೆ ಬಂದಿದ್ದೆ. ಒಂದು ದಿನ ಯಲ್ಲಾಪುರ ಪೇಟೆಗೆ ಹೋಗುವ ಸಂದರ್ಭ ಬಂತು. ನಮ್ಮದೊಂದು ಸಂಪ್ರದಾಯ ಇದೆ. 'ಐಯ್ಯಂಗಾರ್ ಬೇಕರಿ' ಲಿ ಒಂದಿಷ್ಟು ಕಾಣಿಕೆ ಹಾಕದೇ ನನ್ನ ಯಲ್ಲಾಪುರ ಪೇಟೆ ಪ್ರವಾಸ ಮುಕ್ತಾಯವಾಗುವುದಿಲ್ಲ. ಇದೇ ಸಂಪ್ರದಾಯದ ಪ್ರಕಾರ 'ಐಯ್ಯಂಗಾರ್ ಬೇಕರಿ' ಒಳಹೊಕ್ಕಾಯಿತು.
..

ಒಂದಿಷ್ಟು ಬನ್ನು-ಸಮೋಸಾ, ಸುಡುಗಾಡು- ಸುಂಠಿ ಎಲ್ಲಾ ಪ್ಯಾಕ್ ಮಾಡಿಸಿಕೊಂಡು, ಕೊನೆಗೆ,
..
"ನಾಲ್ಕು ಡೇರಿ-ಮಿಲ್ಕ್ ಕೊಡಿ" ಅಂದೆ.
"ಎಷ್ಟು ರೂಪಾಯಿದು ಕೊಡ್ಲಿ ಅಣ್ಣಾ" ಬೇಕರಿಯವನು ಕೇಳಿದ .
..
"ಇಪ್ಪತ್ತು ಮಾರ್ಕ್ಸಿಂದು ಇದೆಯಲ್ವಾ... ಅದೇ ಕೊಡಿ" ಅಂದೆ.
..
ಪಕ್ಕದಲ್ಲೇ ನಿಂತಿದ್ದ ಬೇಕರಿ ಓನರ್ರು ಮತ್ತು ಸರ್ವಂಟು ತಮ್ಮ ಮೂವತ್ತೆರಡೂ ಹಲ್ಲು ಕಿಸಿದು ನಗಲಾರಂಭಿಸಿದರು.
..
"ಇಪ್ಪತ್ತು ಮಾರ್ಕ್ಸಿಂದು ಸಾಕಾ? ನೂರೂ ಮಾರ್ಕ್ಸಿಂದು ಬೇಡ್ವಾ? " ಓನರ್ರು ಉವಾಚ .

ಅವರಿಗೆ ಹಾಸ್ಯವಾದರೆ..... ನನಗೆ ಪಜೀತಿ....

ನನಗೆ ಇಪ್ಪತ್ತು ರೂಪಾಯಿ ಹೇಳುವುದು ಹೇಗೆ ಇಪ್ಪತ್ತು ಮಾರ್ಕ್ಸು ಅಂತ ಬಾಯಿಂದ ಹೊರಬಿತ್ತು ಅನ್ನುವುದೇ ಗೊತ್ತಿಲ್ಲ..... ಆ ಎಕ್ಸಾಮು, ಮಾರ್ಕ್ಸಿನ 'ಗುಂಗು' ಇನ್ನೂ ತಲೆಯಲ್ಲೇ ಗುಂಯ್ ಗುಡುತ್ತಿರಬೇಕು.
..

ಈ 'ಗುಂಗು' ಅಪರೂಕ್ಕೊಮ್ಮೆ ಎಲ್ಲರನ್ನೂ ಕಾಡುತ್ತಾ, ಹಂಗಿಸುತ್ತಿರುತ್ತದೆ......

..
ಕೆಲಸವಿಲ್ಲದಿರುವ ನಾನು ಒಂದು ಕೆಲಸ ಬೇಕು ಅಂತ ಇಂತಹ‌ ಬರಹದ ಕೆಲಸಗಳನ್ನು ಮಾಡುತ್ತೇನೆ. ಕೆಲಸಗಳಲ್ಲಿ ಇರುವ ನೀವು ಫೇಸ್ ಬುಕ್ ನಲ್ಲಿ ಎಕ್ಟ್ರಾ ಕೆಲಸ ಮಾಡಲು ಇಣುಕಿದಾಗ ನನ್ನ ಈ ಕೆಲಸವಿಲ್ಲದ ಬರಹಗಳನ್ನು ಓದಿ ನಿಮ್ಮ ಬೇರೆ ಕೆಲಸಗಳನ್ನು ಹಾಳುಮಾಡಿಕೊಳ್ಳಬೇಡಿ ಎಂಬುದು ಈ ಕೆಲಸವಿಲ್ಲದ ಹುಡುಗನ ಹೇಳಿಕೆ. ನೀವು ಈ ಸಾಲುಗಳನ್ನೂ ಓದುವ ಕೆಲಸ ಮಾಡಿತ್ತಿದ್ದರೆ ಅದು ವ್ಯರ್ಥ ಕೆಲಸ.

17  ಜುಲೈ 2019 
ಬೆಂಗಳೂರು