ಮ್ಮ ಮಲೆನಾಡನ್ನು ಎಷ್ಟು ವರ್ಣಿಸಿದರೂ ಸಾಲದು. ದೇಶದ ಶ್ವಾಸಕೋಶಗಳೆಂದೇ ಕರೆಯುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಮಲೆನಾಡು ಅತ್ತ್ಯುಚ್ಚವಾದ ಹಸಿರು ಸಂಪತ್ತನ್ನು ಹೊಂದಿದೆ. ನಾನು ಬಾಲ್ಯದಿಂದಲೂ ಮಲೆನಾಡಿನ ನಿಸರ್ಗದ ಮಧ್ಯೆ ಬೆಳೆದು ಬಂದವನು. ಮಲೆನಾಡು ನೂರಾರು ಎತ್ತರದ ಹಚ್ಚಹಸಿರಿನ ಬೆಟ್ಟ-ಗುಡ್ಡಗಳನ್ನು ಹೊಂದಿರುವಂಥದ್ದೂ , ಆದರೆ ಮಾನವನ ಹಸ್ತಕ್ಷೇಪಕ್ಕೆ ಮಲೆನಾಡು ತನ್ನ ಮೂಲಸೌಂದರ್ಯವನ್ನು ಕಳೆದುಕೊಳ್ಲುತ್ತಿದೆ. ನಾನು ಬಾಲ್ಯದಲ್ಲಿ ಕಂಡಂತಹ ಮಲೆನಾಡು ಈಗ ಪೂರ್ಣ ಪ್ರಮಾಣದಲ್ಲಿ ಇದ್ದಂತೆ ಕಾಣುತ್ತಿಲ್ಲ.

ಕುವೆಂಪು , ತೇಜಸ್ವಿಯವರ ಪುಸ್ತಕಗಳಲ್ಲಿ ಕಂಡ ಮಲೆನಾಡು ಈಗ ಮರೀಚಿಕೆಯಷ್ಟೇ. ನಾನು ಚಿಕ್ಕವನಿದ್ದಾಗ ಕಂಡ ಅಬ್ಬರಿಸುತ್ತಾ ಸುರಿಯುವ ಮಳೆಯಿಂದ ನದಿ ಕೆರೆ ಕೊಳ್ಳಗಳನ್ನೆಲ್ಲಾ ಉಕ್ಕಿ ರಸ್ತೆಗಳಲ್ಲೆಲ್ಲಾ ನೀರು ನಿಂತು ಬಸ್ಸುಗಳೂ ಓಡಾಡಲು ಆಗದಂತಾಗಿ ಶಾಲೆಗೂ ರಜೆ ಕೊಡುವಷ್ಟು ಮಟ್ಟಿಗೆ ಆಗುತ್ತಿತ್ತು. ನಮ್ಮೂರಿನ ಗಂಗಾವಳಿ ನದಿಯಂತೂ ಭೋರ್ಗರೆದು ಹರಿದುಬಿಡುತ್ತಿತ್ತು. ಆದರೆ ಕೆಲವು ವರ್ಷಗಳಿಂದ ನಮ್ಮ ಮಲೆನಾಡಿನ ಪರಿಸರವೇ ಬದಲಾಗತೋಡಗಿದೆ ಮಳೆಯ ಪ್ರಮಾಣವೇ ಬಹಳಷ್ಟು ಇಳಿದುಹೋಗಿದೆ. ನಮ್ಮ ಗಂಗಾವಳಿಯ ಉದಾಹರಣೆಯನ್ನೇ ತೆಗೆದುಕೊಂಡಾಗ ಕೇಲವೇ ವರ್ಷಗಳ ಹಿಂದೇ ದಟ್ಟವಾದ ಮರಗಳಿಂದ ಕೂಡಿದ ದಂಡೆಯಿಂದ ಗಂಗಾವಳಿ ನದಿ ಕಂಗೊಳಿಸುತ್ತಿದೆ. ಆದರೆ ಈಗ ? ನದಿಯ ಬದಿಯಲ್ಲಿನ ನೂರಾರು ಮರಗಳು ಒಣಗಿ ಹೋಗಿವೆ, ಜನರ ಸ್ವಾರ್ಥಕ್ಕೆ ಬಲಿಯಾಗುತ್ತಿವೆ ನದಿಯ ಸೌಂದರ್ಯವೇ ನಶಿಸತೋಡಗಿದೆ.
ಇದರ ಹಾಗೆ ನಮ್ಮ ಮಲೆನಾಡಿನಲ್ಲಿ ನೀರಿನ ಸೆಲೆಗಳು , ಅಂತರ್ಜಲದ ಮಟ್ಟವೂ ಇಳಿಯತೊಡಗಿವೆ ಅರಣ್ಯನಾಶವೂ ನಿಧಾನವಾಗಿ ಸಾಗುತ್ತಿದೆ.
ನಾನು ಹತ್ತನೇ ತರಗತಿಯಲ್ಲಿದ್ದಾಗ ವನ ಮಹೋತ್ಸವದ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಶ್ರೀಗಳು ಒಂದು ಮಾತನ್ನು ಹೇಳಿದ್ದರು – ‘ ನಮ್ಮ ಸರ್ಕಾರದಲ್ಲಿ ಅಭಿವೃಧ್ಧಿಯ ಹೆಸರಿನಲ್ಲಿ ಮರಗಳನ್ನು ಕುಡಿಯಲು ಹಲವಾರು ಇಲಾಖೆಗಳಿವೆ. ಆದರೆ ಮರಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಒಂದೇ ಇದೆ ‘ . ನಿಜ. ನಮ್ಮಲ್ಲಿ ಪರಿಸರಕ್ಕೆ ಮಾರಕವಾಗದಂತೆ ಮಲೆನಾಡಿನ ಅಭಿವೃಧ್ಧಿ ಮಾಡಲು ಹಲವಾರು ಅವಕಾಶಗಳಿವೆ. ಆದರೆ ಅವುಗಳು ಯಾವುವೂ ನಮ್ಮ ಕಣ್ಣಿಗೆ ಕಾಣುತ್ತಿಲ್ಲವಲ್ಲ ! ಇಷ್ಟು ವರ್ಷಗಳ ಕಾಲ ಮಲೆನಾಡಿನ ಕಾಡಿನ ಮೇಲೆ ನಡೆದ ದುರಾಕ್ರಮಣ ಫಲ ಈಗ ಕಾಣುತ್ತಿದೆ.
ಮಲೆನಾಡಿನ ನದಿಗಳು ಬತ್ತತೊಡಗಿವೆ , ಮಳೆಯ ಪ್ರಮಾಣ ಮೊದಲಿಗೆ ಹೋಲಿಸಿದರೆ ಬಹಳಷ್ಟು ಕಡಿಮೆಯಾಗಿದೆ.
ವನ್ಯಪ್ರಾಣಿಗಳು ಆವಾಸ ನೆಲೆ ಕಳೆದುಕೊಂಡು ವಿನಾಶದ ಅಂಚಿಗೆ ತಲುಪುತ್ತಿವೆ. ಅರಣ್ಯಗಳೂ ನಾಶವಾಗುತ್ತಿವೆ. ಮಲೆನಾಡು ಬರಡುನಾಡಾಗುತ್ತಿದೆ.
ಆದರೂ ಕಾಲ ಮಿಂಚಿಲ್ಲ ಜನರು ಈಗಲೇ ಜಾಗೃತರಾದರೆ ನಮ್ಮ ಮಲೆನಾಡನ್ನು ನಾವೇ ಸಂರಕ್ಷಿಸಿಕೊಳ್ಳಬಹುದು. ಮರಗಳನ್ನು ರಕ್ಷಿಸುವ ಹಸಿರನ್ನು ಹಬ್ಬಿಸುವ ವೃಕ್ಷಾಂದೋಲನ ಆಗಲೇಬೇಕಾಗಿದೆ. ಜಲಮೂಲಗಳ ಸಂರಕ್ಷಣೆಯೂ ಅವಶ್ಯವಾಗಿದೆ. ಇಲ್ಲದಿದ್ದರೆ ಮುಂದಿನ ಜನಾಂಗದವರು ಬರಿ ಫೋಟೋಗಳಲ್ಲೇ ಮಲೆನಾಡಿನ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳುವ ಕಾಲ ಬರುವುದು ನಿಶ್ಚಿತ. ಇನ್ನಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖರಾಗೋಣ ಇಲ್ಲದಿದ್ದರೆ ಮಲೆನಾಡು ಬರಡುನಾಡಾಗುತ್ತದೆ……
ಎಚ್ಚರ…..!

2018, ಧಾರವಾಡ