ತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿರುವ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ೫೪ನೇ ಯತಿಗಳಾದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಹಸಿರು ಸ್ವಾಮಿಜಿ ಎಂದೇ ಪ್ರಸಿದ್ಧರು. ಜಪ, ತಪ, ಜನಜಾಗೃತಿ, ಶಿಕ್ಷಣ, ಆರೋಗ್ಯ, ವನವಾಸಿಗಳ ಅಭಿವೃದ್ಧಿ, ವ್ಯಸನ ಮುಕ್ತ ಸಮಾಜ ಕಾರ‍್ಯಕ್ರಮ, ಜೀವನ ಶಿಕ್ಷಣ ಶಿಬಿರ, ಯೋಗ, ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಸರು ಅವರು.

ಕಳೆದ ಹಲವಾರು ವರ್ಷಗಳಿಂದ ನಮ್ಮ ಮಲೆನಾಡಿನ ಪಶ್ಚಿಮ ಘಟ್ಟಗಳ ಜಲ, ಜೀವ ವೈವಿಧ್ಯ ಸಂರಕ್ಷಣೆಗಾಗಿ ಮತ್ತು ಅವುಗಳ ಅಭಿವೃದ್ಧಿಗಾಗಿ ಜನಾಂದೋಲನವನ್ನು ರೂಪಿಸಿರುವುದು ಸ್ವರ್ಣವಲ್ಲೀ ಶ್ರೀಗಳ ಹಿರಿಮೆ. ನೈಸರ್ಗಿಕ ಪರಿಸರದ ಕುರಿತ ಅವರ ಕಾಳಜಿಯ ಫಲವೇ ಸಸ್ಯಲೋಕ.
 
ಸಸ್ಯಲೋಕದ ಹಿನ್ನೆಲೆ
ಪಶ್ಚಿಮ ಘಟ್ಟದ ಮತ್ತು ಬೇರೆ ಬೇರೆ ಪ್ರದೇಶದ ಎಲ್ಲ ಸಸ್ಯ ವೈವಿಧ್ಯಗಳನ್ನು ಸಂಗ್ರಹಿಸಿ ತಂದು ಒಂದೆಡೆಯಲ್ಲಿ ಬೆಳೆಸಿ ಸಂರಕ್ಷಿಸುವ ಸಲುವಾಗಿ ರೂಪುಗೊಂಡ ಯೋಜನೆಯೇ ಸಸ್ಯಲೋಕ. ಸ್ವರ್ಣವಲ್ಲಿ ಮಠಕ್ಕೆ ಹೊಂದಿಕೊಂಡಿರುವಂತಹ ವಿಶಾಲವಾದ ೧೫ ಹೆಕ್ಟೇರ್‌ ಇಳಿಜಾರಿನ ಬೆಟ್ಟ ಪ್ರದೇಶದಲ್ಲಿ ಸಸ್ಯಲೋಕ ರೂಪುಗೊಂಡಿದೆ.
 
ಪಶ್ಚಿಮ ಘಟ್ಟದ ಸಸ್ಯವೈವಿಧ್ಯ ಮತ್ತು ಅವುಗಳ ಮಹತ್ವದ ಕುರಿತಂತೆ ಇರುವಂತಹ ಪ್ರಾಚೀನ ಹಾಗೂ ರ‍್ವಾಚೀನ ಈ ಎರಡೂ ಜ್ಞಾನ ಶಾಖೆಗಳ ಮಾಹಿತಿ ಬಳಸಿ ಉದ್ಯಾನವನ ನಿರ್ಮಾಣವಾಗಿದೆ. ಭಾರತದಾದ್ಯಂತದ ಅರಣ್ಯ ಪ್ರದೇಶಗಳು ಹಾಗೂ ದೇಶ ವಿದೇಶಗಳಿಂದ ಅಪರೂಪದ ಸಸ್ಯಗಳನ್ನು ಇಲ್ಲಿ ತಂದು ಬೆಳೆಸುವ ಕಾರ್ಯ ಆಗುತ್ತಿದೆ. ಸಸ್ಯ ಸಂಕುಲದ ಸಂರಕ್ಷಣೆ, ಸಂವರ್ಧನೆ ಮತ್ತು ಸಮುದಾಯ ಜ್ಞಾನ ಅಭಿವೃದ್ಧಿ ಕುರಿತಂತೆ ಕೆಲಸ ಮಾಡುವುದು ಇದರ ಉದ್ದೇಶವಾಗಿದೆ.

ವೈಶಿಷ್ಟ್ಯ, ವೈವಿಧ್ಯ
ಸಸ್ಯಲೋಕದ ಇಡೀ ಪ್ರದೇಶ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು ಅದರ ನೈಸರ್ಗಿಕ, ಭೌಗೋಳಿಕ ರಚನೆ ಆಧರಿಸಿ ವಿವಿಧ ಸಂರಕ್ಷಣಾ ಅಂಶಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಹೂವಿನ ಗಿಡಗಳ ಅಂಗಣ, ಹಣ್ಣಿನ ಗಿಡಗಳ ಅಂಗಣ, ಪಶ್ಚಿಮ ಘಟ್ಟಗಳ ಅಪರೂಪದ ಸಸ್ಯವೈವಿಧ್ಯಗಳ ಅಂಗಣ, ಪರಪ್ರದೇಶದ ಸಸ್ಯಗಳು, ಔಷಧೀಯ ಸಸ್ಯಗಳ ಮೂಲಿಕಾವನ, ನಕ್ಷತ್ರವನ, ರಾಶಿವನ ಇತ್ಯಾದಿಗಳು ಅವುಗಳಲ್ಲಿ ಪ್ರಮುಖ ಗಿಡಗಳನ್ನು ನೆಟ್ಟು ನಾಮಫಲಕ ಹಾಕಿರುವುದು ವಿಶೇಷ.
 
ಇಲ್ಲಿ ಪಶ್ಚಿಮ ಘಟ್ಟದ ಅಪೂಪದ ಗಿಡಗಳಾದ ದಾಲ್ಚಿನ್ನಿ, ರಾಮಪತ್ರೆ, ಸಿರಿಹೊನ್ನೆ ಮುಂತಾದ ಗಿಡಗಳಲ್ಲದೇ ಒಳ್ಳೆಯ ಮರಮಟ್ಟು ಎನಿಸಿಕೊಂಡಿರುವ ಮತ್ತುಗ, ನಂದಿ, ಬೀಟೆ, ಮಾವು, ಹಲಸು ಮುಂತಾದ ಗಿಡಗಳಿವೆ. ಔಷಧ ಸಸ್ಯಗಳಾದ ಅಶ್ವಗಂಧಿ, ವಾಯು ವಿಳಂಗ, ರ‍್ಪೂರ ಲಕ್ಕಿ, ರಾಸ್ನಾ, ಆಡುಮುಟ್ಟದ ಬಳ್ಳಿ ಮುಂತಾದ ನೂರಾರು ವೈವಿಧ್ಯದ ಗಿಡಗಳಿವೆ. ಅಶ್ವತ್ಥ, ಆಲ, ಹತ್ತಿ, ಬಿಲ್ವ ಮುಂತಾದ ಪವಿತ್ರವನ ವೃಕ್ಷಗಳಿವೆ. ಈಗಾಗಲೇ ಹಲಾವರು ಜಾತಿಯ ಸಾವಿರಾರು ಸಸ್ಯಗಳನ್ನು ಬೆಳೆಸಲಾಗಿದೆ.
 
ಸಸ್ಯಲೋಕವು ಸಸ್ಯ ವೈವಿಧ್ಯಗಳ ಸಂರಕ್ಷಣೆ ಜತೆಗೆ ಅವುಗಳ ಅಭಿವೃದ್ಧಿ ಹಾಗೂ ಅವುಗಳ ಕುರಿತು ಜ್ಞಾನ ಪ್ರಸರಣ ಕರ‍್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುವ ಆಶಯ ಹೊಂದಿದೆ. ಸ್ವರ್ಣವಲ್ಲೀ ಮಠವು ಮಲೆನಾಡಿನ ರೈತರ, ಕೃಷಿ ಅಭಿವೃದ್ಧಿಗಾಗಿ, ಕೃಷಿ ಮಾಹಿತಿಗಾಗಿ ಪ್ರತಿ ವರ್ಷ ಕೃಷಿ ಜಯಂತಿಯನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳುತ್ತದೆ. ಇದರಲ್ಲಿ ಕೃಷಿಗೆ ಸಂಬಂಧಿಸಿದಂತಹ ಮಳಿಗೆಗಳು, ಉಪನ್ಯಾಸ, ಚರ್ಚೆಗಳು, ಕೃಷಿಕರಿಗೆ ಉತ್ತಮ ಮಾಹಿತಿಗಳನ್ನು ಕೊಡಲಾಗುತ್ತದೆ.
 
ಸಸ್ಯಲೋಕದ ಇನ್ನೊಂದು ಆಶಯವೇನೆಂದರೆ ವನ ಸಮುದಾಯವನ್ನು ವಿವಿಧ ಕರ‍್ಯಕ್ರಮಗಳ ಮೂಲಕ ಪರಿಸರದ ನಿಟ್ಟನಲ್ಲಿ ಜಾಗೃತಿಗೊಳಿಸುವುದು ಹಾಗೂ ಸಬಲೀಕರಣಗೊಳಿಸುವುದು. ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಚಿತವಾಗಿ ಗಿಡಗಳನ್ನು ರೈತರಿಗೆ ಸ್ವಸಹಾಯ ಸಂಘಗಳ ಸದಸ್ಯರಿಗೆ, ಶಾಲಾ ಮಕ್ಕಳಿಗೆ ಪ್ರತಿವರ್ಷ ವಿತರಿಸುವ ಕಾರ‍್ಯ ನಡೆಯುತ್ತಿದೆ.