ನ್ನ ಹುಟ್ಟೂರು ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ. ಈಗ ನಾನಿರುವುದು ಕಲ್ಲೇಶ್ವರದಲ್ಲಾದರೂ ನಾನು ಬಾಲ್ಯವನ್ನು ಕಳೆದಕಳಚೆ, ನನ್ನನ್ನು ಸೆಳೆಯುವುದು ತನ್ನ ನಿಸರ್ಗ ಸೌಂದರ್ಯದಿಂದ. ದೊಡ್ಡ ಗಾತ್ರದ ರುಚಿಗೆ ಹೆಸರಾದ ತೆಂಗಿನಕಾಯಿ ಹುಳಿ ( ಸಾಂಬಾರು) ಗೆ ನನ್ನೂರು ಪ್ರಸಿದ್ಧಿ. ಹಲಸಿನಕಾಯಿಯ ಹುಳಿಯಂತೂಇಲ್ಲಿ ಎಷ್ಟು ಸಾಮಾನ್ಯವೆಂದರೆ ಜಗತ್ತಿನಲ್ಲಿ ಎಲ್ಲೇ ಇದನ್ನು ಮಾಡಿದರೂ ಕರೆಯುವುದು 'ಕಳಚೆ ಹುಳಿ' ಎಂದೇ. ಇದೀಗ ಕೆಲ ವರ್ಷಗಳಿಂದ ಅಡಿಕೆ ಪತ್ರಿಕೆ ಮತು ಅದರ ಸಂಪಾದಕರಾದ ಶ್ರೀ ಪಡ್ರೆಯವರು ನಡೆಸುತ್ತಿರುವ ಅಭಿಯಾನದಿಂದ ಹಲಸಿನ ಮಹತ್ವ ತುಸು ಗೊತ್ತಾಗುತ್ತಿದೆ. ಆದರೆ ಬಹುಷಃ ಕಳಚೆ ಗ್ರಾಮ ಹಲಸಿನ ಸದ್ಭಳಕೆಯಲ್ಲಿ ಅದಕ್ಕಿಂತ ಎಷ್ಟೋ ಮೊದಲೇ ದಾಪುಗಾಲನ್ನು ಇಟ್ಟಿತ್ತು. ಈ ಭಾಗದಲ್ಲಿ ಕಳಚೆ ಹುಳಿಯಿಲ್ಲದೇ ಯಾವುದೇ ಕಾರ್ಯಕ್ರಮದ ಭೋಜನವೂ ಪುರ್ಣವಾಗದು.

ಅಡಿಕೆ ಮತ್ತು ತೆಂಗು ಕಳಚೆಯ ಮುಖ್ಯ ಬೆಳೆ. ಇಲ್ಲಿನ ತೋಟಗಳಿಗೆ ಮತ್ತು ಜನರಿಗೆ ಬೆಟ್ಟಗಳಿಂದ ಹರಿದು ಬರುವ ಝರಿನೀರು ಮತ್ತು ಕೆರೆ ನೀರೇ ಆಸರೆ. ಈ ಭಾಗದಲ್ಲಿ ತೋಟಗಳು ಇಳಿಜಾರಾಗಿದ್ದು ತೋಟದ ಕೆಲಸಕ್ಕೆ ಬಹಳಷ್ಟು ಪರಿಶ್ರಮ ಅನಿವಾರ್ಯ. ಹಾಗಂತಲೇ ಇಲ್ಲಿನ ಜನರು ಮೊದಲಿನಿಂದಲೂ ಶ್ರಮಜೀವಿಗಳು. ಹೀಗಾಗಿ ಅಲ್ಲಿನ ಪ್ರತಿಯೊಂದು ಸ್ಥಳೀಯ ಉತ್ಪನ್ನಕ್ಕೂ ಅವರೇ ಬೆಲೆ, ಬಳಕೆಯ ಮಾರ್ಗ ಕಂಡುಕೊಳ್ಳುತ್ತಿದ್ದರು. ಇಂದಿಗೂ ಅದು ಇದೆ. ಹೀಗಾಗಿಯೇ ನಮ್ಮೂರೆಂದರೆ ಹೆಮ್ಮೆ.

ನಮ್ಮೂರಿಗೆ ಯಲ್ಲಾಪುರದಿಂದ ದಿನನಿತ್ಯ ಬಸ್ಸು ಬರುತ್ತದೆ. ಹೊಂಡಗಳಲ್ಲಿ ಹಾರುತ್ತಾ ಇಳಿಯುತ್ತಾ ಬರುವ ಬಸ್ಸು ನಿಲ್ಲುವ ಮೊದಲೇ ಕಿಟಕಿಯಿಂದ ಟವೆಲನ್ನು ಒಗೆದು ಜಾಗವನ್ನಿಡಿದು ಕೂರುತ್ತಿದ್ದ ಆಗಿನ ಜನರು, ಬಾಲ್ಯದಲ್ಲಿ ತಿನ್ನುತ್ತಿದ್ದ ಮಾವಿನಕಾಯಿಗಳು, ಏನೇನೋ ಹೆಸರು ಗೊತ್ತಿರದ ಹಣ್ಣುಗಳ ನೆನಪು, ಆ ಹಸಿರು ತೋಟ ಬೆಟ್ಟಗಳು, ಮಳೆಗಾಲದಲ್ಲಿ ಹುಟ್ಟಿ ಹರಿಯುವ ಅನಾಮಿಕ ಝರಿ - ಜಲಪಾತಗಳು, ಬೇಸಿಗೆಯಲ್ಲಿ ಮುತ್ತಿಗೆ ಹಾಕಿ ಕೊಯ್ಯುತ್ತಿದ್ದ ಜಂಬು ನೇರಳೆ ಹಣ್ಣುಗಳು, ಶಾಲೆ ಬಿಟ್ಟ ಮೇಲೆ ಹೋಗುತ್ತಿದ್ದ ಅಂಗಡಿಗಳು, ಪ್ರತಿವರ್ಷ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳ ಜತೆಗೆ ಕಳಚೆ ಹುಳಿಯ ರುಚಿ ಇಂದಿಗೂ ನನ್ನನ್ನು ಊರಿನೆಡೆಗೆ ಸೆಳೆಯುತ್ತದೆ.

(ಹಸಿರುವಾಸಿ ಪತ್ರಿಕೆಯಲ್ಲಿ ಪ್ರಕಟಿತ ಬರಹ)