ಲ್ಲರಿಗೂ ಒಂದೊಂದು ರೀತಿಯ ಹುಚ್ಚು! ಒಬ್ಬರಿಗೆ ಬರೆಯುವ ಹುಚ್ಚು, ಒಬ್ಬರಿಗೆ ಹಾಡುವ ಹುಚ್ಚು! ಒಬ್ಬರಿಗೆ ನಟನೆಯ ಹುಚ್ಚು! ಒಬ್ಬರಿಗೆ ಪ್ರವಾಸದ ಹುಚ್ಚು! ಒಬ್ಬರಿಗೆ ಹೊಸ ಹೊಸ ಅಡುಗೆ ಮಾಡುವ ಹುಚ್ಚು! ಇನ್ನೂ ಒಂದು ಹೆಜ್ಜೆ ಮುಂದೆ ಬಂದರೆ….. ಕೆಲವರಿಗೆ ಪಬ್ಜಿ ಆಡುವ ಹುಚ್ಚು! ಕೆಲವರಿಗೆ ಟಿಕ್ ಟಾಕ್ ವಿಡಿಯೋ ಮಾಡುವ ಹುಚ್ಚು! ದಿನವಿಡೀ ಫೇಸ್ ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜು, ಕಾಮೆಂಟು ಕುಟ್ಟುವ ಹುಚ್ಚು!

..
ಇನ್ನೂ ಕೆಲವರಿಗೆ ಫೋಟೋ ತೆಗೆಯುವ ಹುಚ್ಚು!
..
ಇಲ್ಲಿ “ಹುಚ್ಚು” ಎಂಬ ಶಬ್ದದ ಪ್ರಯೋಗ ಸರಿಯಾಗಿದೆಯೋ ಇಲ್ಲವೋ…. ಗೊತ್ತಿಲ್ಲ. ನಾನು ಅಥೈಸಿಕೊಂಡ ಪ್ರಕಾರ ಈ ಹುಚ್ಚು ಎನ್ನುವುದು ಯಾವುದೋ ಒಂದು ವಿಷಯದ ಬಗೆಗಿನ ಅತೀವ ಪ್ರೀತಿ, ಆಸಕ್ತಿ. ನಮ್ಮ ಆ ಹುಚ್ಚಿನ ಕೆಲಸ ಶುರುಮಾಡಿದರೆ ಈ ಜಗತ್ತನ್ನೇ ಮರೆತುಬಿಡುತ್ತೇವೆ.
..
ಬೇರೆ ಬೇರೆ ಹುಚ್ಚಿನ ವಿಷಯವನ್ನು ಬದಿಗಿಟ್ಟು, ನನ್ನ ಹುಚ್ಚಿನ ಬಗ್ಗೆ ಹೇಳಬೇಕಲ್ಲಾ…..! ನನಗೆ ಈ ‘ಫೋಟೋಗ್ರಾಪಿ’ ಎನ್ನುವುದೊಂದು ಹುಚ್ಚು. ಆ ಹುಚ್ಚು ಶುರುವಾಗಿದ್ದು ಯಾವಾಗಲೋ ನಾನರಿಯೆ… ಅದು ಶುರುವಾಗಿದ್ದು ಮೊದಲು ಮೊಬೈಲ್ ಫೋಟೋಗ್ರಾಫಿಯಿಂದ. ಮೊದಲು ಮನೆಯಲ್ಲಿದ್ದ ಕೀಪ್ಯಾಡ್ ಮೊಬೈಲ್ ನಲ್ಲಿ ಫೋಟೋ ತೆಗೆಯುವುದರಲ್ಲೇ ಖುಷಿಪಡುತ್ತಿದ್ದೆ.
..
ಅದು ಸುಮಾರು ಐದು ವರ್ಷಗಳ ಹಿಂದೆ ಇರಬೇಕು. ಆಗ ನಾನು ಎಂಟನೇ ಕ್ಲಾಸಿನಲ್ಲಿರುವಾಗ ನಮ್ಮ ಮನೆಗೆ ಮೊದಲ ಸ್ಮಾರ್ಟ ಫೋನ್ ಕಾಲಿಟ್ಟಿತ್ತು. ಕೀಪ್ಯಾಡ್ ಮೊಬೈಲ್ ನಲ್ಲಿ ಫೋಟೊ ತೆಗೆಯುವವನಿಗೆ ಸ್ಮಾರ್ಟ ಫೋನ್ ಬಂದರೆ ಬಿಡೋಕಾಗತ್ತಾ…

..
ಆ ಒಂದು ಸಮಯದಲ್ಲಿ ನನಗೆ ಆ ಸ್ಮಾರ್ಟಫೋನ್ ನಲ್ಲಿ ಬರುವ ಫೋಟೋ ಕ್ವಾಲಿಟಿ ಮುಂದೆ ಬಹಳ ದುಡ್ಡು ಕೊಟ್ಟು ಈ ದೊಡ್ಡ ದೊಡ್ಡ ಕ್ಯಾಮೆರಾಗಳನ್ನು ಖರಿದಿಸುವುದು ವೇಸ್ಟ್ ಎನಿಸುತ್ತಿತ್ತು. ‘ ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಗಾದೆ ಅಪ್ಲೈ ಆಗಿತ್ತು ನನಗೆ…
..
ತೋಟದ ಹುಳ-ಹುಪ್ಪಟೆಗಳಿಂದ ಹಿಡಿದು ದೊಡ್ಡ ದೊಡ್ಡ ಮರದವರೆಗೂ ಫೋಟೋ ತೆಗೆಯುವುದು ನಡೆಯುತ್ತಲೆ ಇತ್ತು…..
..

ಅದು ಬೇಸಿಗೆ ರಜೆಯ ಕಾಲ ಅಜ್ಜನಮನೆಗೆ ಹೋಗಲೇಬೇಕಲ್ಲಾ… ಮೊಬೈಲೂ ನನ್ನ ಕಿಸೆಯಲ್ಲಿ ಕುಳಿತು ಅಜ್ಜನಮನೆ ಪ್ರವಾಸಕ್ಕೆ ಹೊರಟಿತು. ನನ್ನ ಅಜ್ಜನಮನೆ ಇರುವುದು ಸೊಂದಾದಲ್ಲಿ. ಅದೊಂದು ಐತಿಹಾಸಿಕ ಸ್ಥಳ. ಮೂರು ಮಠಗಳು, ಹಲವಾರು ಹಳೆಯ ಗುಡಿಗಳು, ಶಾಲ್ಮಲಾ ನದಿ ಹರಿಯುವ ಪ್ರದೇಶ ಅದು. ಫೋಟೋ ತೆಗೆಯುವ ನನಗೆ ಅದೊಂಥರ ಅಕ್ಷಯ ಪಾತ್ರೆ ಇದ್ದಂತೆ.
..
ಅದೊಂದಿನ ಅಲ್ಲೇ ಹತ್ತಿರದ ‘ತಪೋವನ’ ಕ್ಕೆ ಹೋಗುವುದೆಂದು ನಿರ್ಧರಿಸಿಯಾಯಿತು. ತಪೋವನವು ಶ್ರೀ ವಾದಿರಾಜರು ತಪಸ್ಸು ಮಾಡಿದ ಸ್ಥಳ. ಅದು ಶಾಲ್ಮಲಾ ನದಿ ಹರಿಯುವ ಜಾಗ. ಕಲ್ಲುಬಂಡೆಗಳನ್ನು ಹತ್ತಿ ಇಳಿದು ಒಂದಿಷ್ಟು ಫೋಟೋ ತೆಗೆದುಕೊಳ್ಳುತ್ತಿರುವಾಗಲೇ……
..
ಮೊಬೈಲು ನೀರಿಗೆ ಬಿತ್ತು. ನೀರೇನೂ ಆಳವಾಗಿರದ ಸ್ಥಳವಾಗಿದ್ದರಿಂದ ಮೊಬೈಲೆನೂ ಸಿಕ್ಕಿತು. ಆದರೆ ನೀರಿಗೆ ಬಿದ್ದ ಆಘಾತವನ್ನು ತಡೆದುಕೊಳ್ಳಲಾರದೇ… ಮೊಬೈಲಿಗೆ ‘ಹಾರ್ಟ ಅಟ್ಯಾಕ್’ ಆಗಿತ್ತು. ಸರ್ವಿಸ್ ಸೆಂಟರ್ ಎಂಬ ಆಸ್ಪತ್ರೆಗೆ ಕಳುಹಿಸಿದರೆ ಬದುಕಿಸಬಹುದು ಎಂಬ ಸಂದೇಶ ಬಂದಿದ್ದರಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಅಲ್ಲಿಗೆ ಪೋಟೋಗ್ರಾಫಿಗೆ ಒಂದು ಅಲ್ಪವಿರಾಮ ಇಟ್ಟಾಯಿತು.
..
ಮೊಬೈಲ್ ಬಂದು ಸುಮಾರು ತಿಂಗಳುಗಳು ಕಳೆದುಹೋಗಿದ್ದರಿಂದ ಈ ಮೊಬೈಲಿಗಿಂತ ಕ್ಯಾಮೆರಾನೇ ಬೆಟ್ಟರ್ರು ಎಂದು ಅನ್ನಿಸತೊಡಗಿತ್ತು. ಅದಕ್ಕೆ ಕಾರಣವೂ ಇತ್ತು…. ಮೊಬೈಲಿನಲ್ಲಿ ಜೂಮ್ ಹಾಕಿ ಪಕ್ಷಿ-ಪ್ರಾಣಿಗಳ ಫೋಟೋ ತೆಗೆಯಲು ಬರುತ್ತಿರಲಿಲ್ಲವಲ್ಲ……
..
ಅಲ್ಲಿಗೆ ಒಂದೆರಡು ವರ್ಷ ಕಳೆದ ನಂತರ ಹತ್ತನೇ ಕ್ಲಾಸಿನಲ್ಲಿ ಚೊಲೋ ಮಾರ್ಕ ತಗೊಂಡರೆ ಕ್ಯಾಮೆರಾ ಕೊಡಿಸುತ್ತೇವೆ ಎಂಬ ಮನೆಯವರ ಕರಾರಿನನ್ವಯ ಒಂದು ಸೆಕೆಂಡ್ ಎಂಡ್ ಕ್ಯಾಮೆರ ಮನೆಗೆ ಬಂದು ಹೊಕ್ಕಿತು. ಅಲ್ಲಿಂದ ಒಂದು ಅಧಿಕೃತ ಫೋಟೋಗ್ರಾಫಿ ಹುಚ್ಚು ಶುರುವಾಯಿತು…….

ಈ ಫೋಟೋಗ್ರಾಫಿ ಪುರಾಣವು ಮುಂದುವರಿಯಲಿದೆ...


16 ಜುಲೈ 2019
ಕತ್ರಿಗುಪ್ಪೆ, ಬೆಂಗಳೂರು